ಶುಂಠಿಯು ಆಹಾರದಲ್ಲಿ ಬಳಸುವ ಒಂದು ಸಂಬಾರ ಪದಾರ್ಥವಾಗಿದೆ. ಶುಂಠಿಯ ಗಿಡದ ನೆಲದೊಳಗಿನ ಭಾಗದ ಕಾಂಡವು ಶುಂಠಿಯೆನಿಸಿಕೊಳ್ಳುತ್ತದೆ. ಏಷ್ಯಾ ಮೂಲದ ಶುಂಠಿಯನ್ನು ಭಾರತ, ಆಗ್ನೇಯ ಏಷ್ಯಾ, ಪಶ್ಚಿಮ ಆಫ್ರಿಕಾ ಮತ್ತು ಕೆರಿಬ್ಬಿಯನ್ ಪ್ರದೇಶಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಸುಮಾರು 3 ರಿಂದ 4 ಅಡಿ ಎತ್ತರಕ್ಕಿರುವ ಶುಂಠಿಯ ಗಿಡವು ತೆಳ್ಳಗೆ ನೇರವಾಗಿರುತ್ತದೆ. ಗಿಡದ ಬಿಳಿ ಮತ್ತು ರೋಜಾ ಬಣ್ಣದ ಮೊಗ್ಗುಗಳು ಹಳದಿ ಬಣ್ಣದ ಹೂವಾಗಿ ಅರಳುತ್ತವೆ. ಹಸಿ ಶುಂಠಿ ಮತ್ತು ಒಣಶುಂಠಿಗಳನ್ನು ಅಡುಗೆಯಲ್ಲಿ ಸಂಬಾರ ಪದಾರ್ಥವನ್ನಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಶುಂಠಿಯನ್ನು ಔಷಧಿಗಳಲ್ಲಿ ಸಹ ಬಳಸುವರು. ಹಸಿ ಶುಂಠಿ ಮತ್ತು ಒಣಶುಂಠಿಗಳನ್ನು ಅಡುಗೆಯಲ್ಲಿ ಸಂಬಾರ ಪದಾರ್ಥವನ್ನಾಗಿ ವ್ಯಾಪಕವಾಗಿ ಬಳಸಲಾಗುತ್ತದೆ.
ಭಾರತೀಯ ಅಡುಗೆ ಪದಾರ್ಥಗಳ ಘಾಟಿ ಮುದುಕಿ ಶುಂಠಿ. ತಂಬುಳಿಗೆ ಘಾಟು, ಮಸಾಲೆಗೆ ಪರಿಮಳ, ಜ್ಯೂಸುಗೆ ಫ್ಲೇವರ್ ನೀಡಿ ತನ್ನ ಇರುವಿಕೆಯನ್ನು ಸಾಬೀತು ಪಡಿಸುವಷ್ಟು ಸ್ಟ್ರಾಂಗ್ ವ್ಯಕ್ತಿತ್ವ ಅದರದ್ದು. ಕೇವಲ ಅಡುಗೆಯಷ್ಟೇ ಅಲ್ಲದೆ ಕೆಮ್ಮು, ಕಫ, ಶೀತಕ್ಕೆ ಮದ್ದಾಗಿ, ಸಂಕಟಕ್ಕೆ ಶಮನಕಾರಿಯಾಗಿ, ಇನ್ಫೆಕ್ಷನ್ ಗಳನ್ನೂ ಇಂಚಿಚಾಗಿ ಹೊಗಲಾಡಿಸುವ ತಾಕತ್ತು ಶುಂಠಿಗಿದೆ. ಹಾಗಾಗಿಯೇ ಆಯುರ್ವೇದ ಮತ್ತು ಹೋಮಿಯೋಪತಿ ವೈದ್ಯಕೀಯ ಪದ್ಧತಿಗಳಲ್ಲಿ ಶುಂಠಿಗೆ ಮಹತ್ವದ ಸ್ಥಾನವಿದೆ. ಜಗತ್ತಿನ ಒಟ್ಟು ಶುಂಠಿಯ ಉತ್ಪಾದನೆಯು 30 % ಪಾಲನ್ನು ಬೆಳೆಯುವ ಭಾರತ ದೇಶ ಮೊದಲ ಸ್ಥಾನದಲ್ಲಿದೆ.