ಶುಂಠಿಯು ಒಂದು ಅದ್ಭುತ ಔಷಧೀಯ ಗುಣಗಳನ್ನು ಒಳಗೊಂಡಿದೆ. ಮನೆ ಮದ್ದು ತಯಾರಿಕೆಯಲ್ಲಿ ಶುಂಠಿಯನ್ನು ಪ್ರಮುಖ ವಸ್ತುವನ್ನಾಗಿ ಬಳಸಲಾಗುತ್ತದೆ. ಇದರಲ್ಲಿ ಇರುವ ರೋಗ ನಿರೋಧಕ ಶಕ್ತಿಯು ಸಾಕಷ್ಟು ಅನಾರೋಗ್ಯ ಸಮಸ್ಯೆಗಳನ್ನು ಬಹು ಬೇಗನೆ ನಿವಾರಣೆ ಮಾಡುವ ಶಕ್ತಿ ಇದೆ. ಭಾರತೀಯ ಅಡುಗೆ ಪದ್ಧತಿಯಲ್ಲಿ ಶುಂಠಿಯನ್ನು ವಿಶೇಷವಾಗಿ ಬಳಸಲಾಗುವುದು. ಅಡುಗೆಯ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ದೇಹಕ್ಕೆ ಅಗತ್ಯವಾದ ಪೋಷಣೆಗಳನ್ನು ನೀಡುವ ವಿಶೇಷ ಗುಣವನ್ನು ಹೊಂದಿದೆ. ಶುಂಠಿಯನ್ನು ನಿಯಮಿತವಾಗಿ ಮುಂಜಾನೆಯ ಆಹಾರದಲ್ಲಿ ಬಳಸುವುದರಿಂದ ದೇಹವು ಹೆಚ್ಚು ಆರೋಗ್ಯಕರವಾಗಿ ಇರುತ್ತದೆ. ಅಲ್ಲದೆ ಹೊರ ಪರಿಸರದಲ್ಲಿ ಇರುವ ವೈರಸ್ ಹಾಗೂ ಸೋಂಕುಗಳ ದಾಳಿಯಿಂದಲೂ ದೇಹವನ್ನು ರಕ್ಷಿಸುವುದು.
ಜೀರ್ಣ ಕ್ರಿಯೆಗೆ ಸಹಾಯ ಮಾಡುವ ಶುಂಠಿಯನ್ನು ಗಣನೀಯವಾಗಿ ಸೇವಿಸುವುದು ಅದ್ಭುತವಾದ ಆಯ್ಕೆಯಾಗುವುದು. ನಿತ್ಯವೂ ಶುಂಠಿ ಸವಿದರೆ ನೋವು, ಮುಟ್ಟಿನ ಸೆಳೆತ, ಜೀರ್ಣಕ್ರಿಯೆಯ ಸಮಸ್ಯೆ ಸೆರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಪ್ರತಿ ನಿತ್ಯ ಮುಂಜಾನೆ ಶುಂಠಿಯನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುವುದರ ಜೊತೆಗೆ ಸಾಕಷ್ಟು ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಇತಿಹಾಸದುದ್ದಕ್ಕೂ ಶುಂಠಿಯನ್ನು ವಾಕರಿಕೆಯ ನಿವಾರಣೆಗಾಗಿ ಬಳಸಲಾಗಿರುವುದನ್ನು ವಿವರಿಸಲಾಗಿದೆ. ಸಮುದ್ರಯಾನಿಗಳಿಗೆ ಸಾಮಾನ್ಯವಾಗಿ ಎದುರಾಗುವ ವಾಕರಿಕೆಯನ್ನೂ ಶುಂಠಿಯ ನೀರು ಕಡಿಮೆಯಾಗಿಸುತ್ತದೆ. ಒಟ್ಟಿನಲ್ಲಿ ಪ್ರತಿನಿತ್ಯ ಶುಂಠಿಯನ್ನು ಸೇವಿಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು.