ಶುಂಠಿ ಹೆಸರಿನಲ್ಲೇ ನಾಲಿಗೆ ಚುರ್ರೆನಿಸುವ ಒಂದು ಗಮ್ಮತ್ತಿದೆ. ನೋಡಲು ಒರಟೊರಟಾಗಿ ಮೈಯಲ್ಲ ಮಣ್ಣು ಮೆತ್ತಿಕೊಂಡು ಜೊತೆಗೆ ತನಗೆ ಬೇಕಾದ ರೀತಿಯಲ್ಲಿ ಕವಲು ಹೊಡೆದುಕೊಂಡು ತನ್ನನ್ನು ಅಚ್ಚುಕಟ್ಟಾಗಿ ಶುಚಿ ಮಾಡಿಕೊಂಡೇ ಉಪಯೋಗಿಸ ಬೇಕೆಂದು ಆಜ್ಞೆ ಮಾಡಿ, ಇಷ್ಟ ಪಟ್ಟು ತಿನ್ನಲು ಹೋದರೆ ತನ್ನ ಅದ್ಬುತ ಘಾಟಿನ ಖಾರವನ್ನು ನೇರವಾಗಿ ನಾಲಿಗೆಯಿಂದ ಮೆದುಳಿಗೆ ಬಡಿಯುವಂತೆ ಮಾಡುವ ತರಕಾರಿ ಗಳ ಗುಂಪಿಗೆ ಸೇರಿದ ಒಂದು ಹೆಸರಾಂತ ಅಡುಗೆ ಸಾಮಗ್ರಿ.

ಬೆಳಗಿನ ಸಮಯದಲ್ಲಿ ಪ್ರತಿ ದಿನ ಶುಂಠಿ ಚಹಾ ಕುಡಿಯುವುದರಿಂದ ನಿಮ್ಮ ದೇಹದ ತೂಕ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತದೆ. ಜೊತೆಗೆ ನಿಮ್ಮ ದೇಹದ ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ನಿರ್ವಹಣೆ ಮಾಡಿ ಸಮತೋಲನವನ್ನು ಕಾಯ್ದುಕೊಳ್ಳುವಂತೆ ಮಾಡುತ್ತದೆ.

ಹಿಂದಿನ ಕಾಲದಿಂದಲೂ ಭಾರತೀಯ ಅಡುಗೆಗಳಲ್ಲಿ ಅಷ್ಟೇ ಏಕೆ ಇಡೀ ವಿಶ್ವದ ತುಂಬೆಲ್ಲಾ ಅಡುಗೆಗಳಲ್ಲಿ ಒಗ್ಗರಣೆಯ ಜೊತೆಗೆ ತನ್ನ ಸ್ನೇಹಿತ ಬೆಳ್ಳುಳ್ಳಿಯ ಜೊತೆಗೆ ರುಚಿಯ ಸಾಮ್ರಾಜ್ಯದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಭಾರತದ ಏಕೈಕ ತರಕಾರಿ ಈ ಶುಂಠಿ. ಸಾಮಾನ್ಯವಾಗಿ ನಮ್ಮ ಮನೆಯಲ್ಲಿರುವ ಹಿರಿಯರು ಈಗಲೂ ಸಹ ತಲೆನೋವು ಬಂದರೆ ಶುಂಠಿ ಚಹಾ ಕೇಳುವುದು ರೂಢಿಯಲ್ಲಿದೆ.

ಶುಂಠಿ ಟೀ ತನ್ನ ಘಮಗುಡುವ ಪರಿಮಳದೊಂದಿಗೆ ಕುಡಿಯಲು ಸಹ ನಾಲಿಗೆಗೆ ರುಚಿ ಕೊಡುತ್ತದೆ. ಇನ್ನು ಆರೋಗ್ಯದ ವಿಷಯಕ್ಕೆ ಸಂಬಂಧ ಪಟ್ಟರಂತೂ, ಇದರಲ್ಲಿ ಬಹಳಷ್ಟು ಖನಿಜಾಂಶಗಳು ಸೇರಿರುವುದರಿಂದ ಬೆಳಗಿನ ಸಮಯದಲ್ಲಿ ಅದರಲ್ಲೂ ಖಾಲಿಹೊಟ್ಟೆಯಲ್ಲಿ ಶುಂಠಿ ಚಹಾ ಕುಡಿದರೆ ಬಹಳ ಬೇಗನೆ ಈ ಖನಿಜಾಂಶಗಳು ನಿಮ್ಮ ದೇಹಕ್ಕೆ ಹೀರಿಕೊಂಡು ದೇಹಕ್ಕೆ ಅಗತ್ಯವಿರುವ ತಮ್ಮ ಕೆಲಸಗಳನ್ನು ಪ್ರಾರಂಭ ಮಾಡುತ್ತವೆ.

ಶುಂಠಿ ಚಹಾದಲ್ಲಿ ವಿಟಮಿನ್ ‘ ಸಿ ‘, ಪೊಟ್ಯಾಶಿಯಂ, ಮೆಗ್ನೀಷಿಯಂ ಮತ್ತು ಕಬ್ಬಿಣದ ಅಂಶ ಇದೆ. ಶುಂಠಿ ಚಹಾ ಕುಡಿಯುವುದರಿಂದ ಮನುಷ್ಯನ ದೇಹಕ್ಕೆ ಈ ಎಲ್ಲಾ ಅಂಶಗಳು ಸೇರಿ ಅನೇಕ ರೀತಿಯ ಆರೋಗ್ಯ ಪೂರಕವಾದ ಲಾಭಗಳು ಲಭಿಸುತ್ತವೆ.

Share
Go top
×