ಅರಿಶಿನ ಹಾಲು ಪ್ರಾಚೀನ ಕಾಲದಿಂದಲೂ ಭಾರತೀಯ ಸಂಪ್ರದಾಯದ ಒಂದು ಭಾಗವಾಗಿದೆ. ಅರಿಶಿನವು ನಮ್ಮ ಜೀವನದ ಬಹು ಮುಖ್ಯ ಆಹಾರ ಪದಾರ್ಥಗಳಲ್ಲಿ ಒಂದಾಗಿದ್ದು ಇದು ಪ್ರತಿಯೊಂದು ಭಾರತೀಯ ಮನೆಯಲ್ಲೂ ಸುಲಭವಾಗಿ ಲಭ್ಯವಿರುತ್ತದೆ. ಇದನ್ನು ಚಿನ್ನದ ಹಾಲು ಎಂದು ಕರೆಯುತ್ತಾರೆ. ಅರಿಶಿನದ ಹಾಲು ಸೇವಿಸುವುದರಿಂದ ನಾವು ಸಾಮಾನ್ಯ ಕಾಯಿಲೆ ಅಥವಾ ನೋವಿನಿಂದ ಪರಿಹಾರ ಪಡೆಯಬಹುದು. ಅರಿಶಿನ ಹಾಲು ಅನೇಕ ಔಷಧೀಯ ಗುಣಗಳಿಂದ ಕೂಡಿದೆ. ಅರಿಶಿನ ಪ್ರತಿಜೀವಕಗಳು ಮತ್ತು ಹಾಲಿನಲ್ಲಿರುವ ಕ್ಯಾಲ್ಸಿಯಂ ಅನ್ನು ಒಟ್ಟಿಗೆ ಬೆರೆಸಿದಾಗ ಅರಿಶಿನ ಹಾಲಿನ ಗುಣಗಳು ಮತ್ತಷ್ಟು ಹೆಚ್ಚಾಗುತ್ತವೆ
ಅರಿಶಿನದಲ್ಲಿ ಕರ್ಕ್ಯುಮಿನ್ ಎಂಬ ಅಂಶವಿದ್ದು, ಇದು ನಮ್ಮ ದೇಹಕ್ಕೆ ಆಂಟಿ – ಇಂಪ್ಲಾಮೆಂಟರಿ, ಆಂಟಿ – ಆಂಕ್ಸಿಡೆಂಟ್ ಗುಣ ಲಕ್ಷಣಗಳನ್ನು ಒದಗಿಸಿ ನಮ್ಮ ದೇಹವನ್ನು ಪುನಃಶೇತನಗೊಳಿಸುತ್ತದೆ. ಹಾಗಾಗಿ ನಮ್ಮ ದೇಹಕ್ಕೆ ಅರಿಶಿನದ ಪ್ರಯೋಜನಗಳು ಲಭ್ಯವಾಗಬೇಕಾದರೆ ಅದನ್ನು ಸರಿಯಾದ ಪ್ರಮಾಣದಲ್ಲಿ ಹಾಲಿಗೆ ಮಿಶ್ರಣ ಮಾಡಿ ಕುಡಿಯುವ ಅಭ್ಯಾಸ ನಾವು ರೂಢಿ ಮಾಡಿಕೊಳ್ಳಬೇಕು. ಅರಿಶಿನದ ಆರೋಗ್ಯ ಪ್ರಯೋಜನಗಳು ಲಭ್ಯವಾಗಬೇಕಾದರೆ ಸಾಧ್ಯವಾದಷ್ಟು ನೈಸರ್ಗಿಕ ರೂಪದಲ್ಲಿ ಸೇವಿಸುವುದು ಉತ್ತಮ.
ಆರೋಗ್ಯ ತಜ್ಞರ ಪ್ರಕಾರ ಅರಿಶಿನವನ್ನು ಬೇರಾವುದೇ ಸಮಯದಲ್ಲಿ ಇನ್ನಾವುದೋ ಆಹಾರದಲ್ಲಿ ಮಿಶ್ರಣ ಮಾಡಿ ಸೇವಿಸುವುದಕ್ಕಿಂತ ರಾತ್ರಿ ಮಲಗುವ ಮುಂಚೆ ಒಂದು ಲೋಟ ಅರಿಶಿನದ ಹಾಲು ಕುಡಿಯುವುದು ಉತ್ತಮ ಎಂದು ಹೇಳುತ್ತಾರೆ.
ಅರಿಶಿನದ ಹಾಲು ತಯಾರಿಸುವ ವಿಧಾನ: ಒಂದು ಲೋಟ ಹಾಲಿಗೆ ಸುಮಾರು ಅರ್ಧ ಚಮಚದಿಂದ ಒಂದು ಚಮಚದಷ್ಟು ಅರಿಶಿಣ ಪುಡಿ ಹಾಕಿ ಕುದಿಯಲು ಪ್ರಾರಂಭವಾದ ಬಳಿಕ ಇಳಿಸಿ ತಣಿಯಲು ಬಿಡಿ. ರುಚಿಗಾಗಿ ಕೊಂಚ ಮೆಣಸಿನ ಪುಡಿ, ಜೇನು ತುಪ್ಪವನ್ನು ಸೇರಿಸಿ.